ಬಾರಕೂಡ
ಸ್ಪೈರೀನಿಡೀ ಕುಟುಂಬಕ್ಕೆ ಸೇರಿದ ಸ್ಪೈರೀನ ಜಾತಿಯ ಹಲವಾರು ಬಗೆಯ ಮೀನುಗಳಿಗಿರುವ ಸಾಮಾನ್ಯ ಹೆಸರು. ಇವುಗಳ ಪೈಕಿ ಕ್ಯಾರಿಬಿಯನ್ ಸಮುದ್ರದಲ್ಲಿ ಸಿಕ್ಕುವ ಗ್ರೇಟ್ ಬಾರಕೂಡ (ಸ್ಪೈರೀನ ಬಾರಕೂಡ) ಎಂಬುದೂ ಕಪ್ಪು ಸಮುದ್ರ ಹಾಗೂ ಮೆಡಿಟರೇನಿಯನ್ ಸಮುದ್ರಗಳಲ್ಲಿ ಸಿಕ್ಕುವ ಯೂರೊಪಿಯನ್ ಬಾರಕೂಡ (ಸ್ಪೈರೀನ ಸ್ಪೈರೀನ) ಹೆಸರಿಸುವಂತಹವು.
ಇವು ದೊಡ್ಡಗಾತ್ರದ ಮೀನುಗಳು. ಇವುಗಳ ಸರಾಸರಿ ಉದ್ದ 2.5 ಮೀ; ತೂಕ 18 ಕೆಜಿ. ದೇಹ ಕೊಂಚ ಚಪ್ಪಟೆ ರೀತಿಯದು. ಮೈಮೇಲೆಲ್ಲ ಸೈಕ್ಲಾಯಿಡ್ ಮಾದರಿಯ ಹುರುಪೆಗಳುಂಟು. ಪಾಶ್ರ್ವರೇಖೆಗುಂಟ (ಲ್ಯಾಟರಲ್ ಲೈನ್) ಜ್ಞಾನೇಂದ್ರಿಯಗಳಿವೆ. ಬಾಯಿ ಅಗಲ, ದವಡೆಗಳಲ್ಲಿ ಗಟ್ಟಿ ಮತ್ತು ಚೂಪು ಹಲ್ಲುಗಳುಂಟು. ಬಾರಕೂಡಗಳು ಸಾಕಷ್ಟು ಶೀಘ್ರಗತಿಯಲ್ಲಿ ಅಂದರೆ ಗಂಟೆಗೆ 15 ಕಿಮೀ ವೇಗದಲ್ಲಿ ಈಜಬಲ್ಲುದು. ಇತರ ಮೀನುಗಳೇ ಇವುಗಳ ಪ್ರಧಾನ ಆಹಾರ. ಬಲು ಎಚ್ಚರದಿಂದ ಹೊಂಚುಹಾಕಿ ಕಾಯುತ್ತಿದ್ದು ಅವು ಹತ್ತಿರ ಸುಳಿದಾಗ ಕ್ಷಣಾರ್ಧದಲ್ಲಿ ಅವುಗಳ ಮೇಲೆ ಎರಗುತ್ತವೆ. ಹಾಗಾಗಿ ಇವನ್ನು ಸಮುದ್ರದ ಹುಲಿಗಳೆಂದು ಕರೆವುದುಂಟು. ನಿರ್ಭಯವಾಗಿ ಸಾಗರಗಳಲ್ಲಿ ಚಲಿಸುವ ಇವು ಮನುಷ್ಯರಿಗೂ ಅಪಾಯಕಾರಿ ಎನಿಸಿವೆ.
(ಪಿ.ಎ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ